ಕೇಂದ್ರೀಯ ವಿಶ್ವವಿದ್ಯಾಲಯಗಳು

	ಭಾರತ ಗಣರಾಜ್ಯದಲ್ಲಿ ಕೇಂದ್ರಸರ್ಕಾರ ನಡೆಸುತ್ತಿರುವ ವಿಶ್ವವಿದ್ಯಾಲಯಗಳು. ಇವು ರಾಜ್ಯಸರ್ಕಾರಗಳು ನಡೆಸುತ್ತಿರುವ ರಾಜ್ಯವಿಶ್ವವಿದ್ಯಾಲಯಗಳಿಗಿಂತ ಭಿನ್ನವಾದವು.

	ಭಾರತದಲ್ಲಿ ಸದ್ಯದಲ್ಲಿ ಐದು ಕೇಂದ್ರೀಯ ವಿಶ್ವವಿದ್ಯಾಲಯಗಳಿವೆ: 1 ಆಲಿಘರ್ ಮುಸ್ಲಿಂ ವಿಶ್ವವಿದ್ಯಾಲಯ, 2 ದೆಹಲಿ ವಿಶ್ವವಿದ್ಯಾಲಯ, 3 ಬನಾರಸ್ ಹಿಂದೂ ವಿಶ್ವವಿದ್ಯಾಲಯ, 4 ಶಾಂತಿನಿಕೇತನದ ವಿಶ್ವಭಾರತಿ ವಿಶ್ವವಿದ್ಯಾಲಯ, 5 ನವದೆಹಲಿಯ ಜವಹರಲಾಲ್ ವಿಶ್ವವಿದ್ಯಾಲಯ.

	ರಾಜ್ಯ ವಿಶ್ವವಿದ್ಯಾಲಯಗಳು ತಮ್ಮ ಚಾಲ್ತಿ ಖರ್ಚಿನ ಬಹುಭಾಗವನ್ನು ರಾಜ್ಯಸರ್ಕಾರಗಳಿಂದ ಪಡೆದುಕೊಂಡರೆ ಕೇಂದ್ರೀಯ ವಿಶ್ವವಿದ್ಯಾಲಯಗಳು ಚಾಲ್ತಿ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳೆರಡರ ವೆಚ್ಚಕ್ಕೂ ಹಣವನ್ನು ಕೇಂದ್ರಸರ್ಕಾರದ ಬೊಕ್ಕಸದಿಂದ ಪಡೆದುಕೊಳ್ಳುತ್ತವೆ. ಕೆಲವೊಮ್ಮೆ ರಾಜ್ಯ ವಿಶ್ವವಿದ್ಯಾಲಯಗಳ ಅಭಿವೃದ್ಧಿಗಾಗಿ ಅಪಾರ ಹಣವನ್ನು ಕೇಂದ್ರ ಸರ್ಕಾರ ಕೊಡುವುದೂ ಉಂಟು. ರಾಜ್ಯ ವಿಶ್ವವಿದ್ಯಾಲಯಗಳ ಅಧಿಕಾರವ್ಯಾಪ್ತಿ ಆಯಾ ರಾಜ್ಯಕ್ಕೆ ಅಥವಾ ಅದರಲ್ಲಿ ನಿರ್ದಿಷ್ಟಗೊಳಿಸಿದ ಕ್ಷೇತ್ರಕ್ಕೆ ಮಾತ್ರ ಅನ್ವಯಿಸುವುದಾದರೆ ಕೆಲವು ಕೇಂದ್ರೀಯ ವಿಶ್ವವಿದ್ಯಾಲಯಗಳ (ಉದಾ: ಜವಹರಲಾಲ್ ವಿಶ್ವವಿದ್ಯಾಲಯ) ಅಧಿಕಾರವ್ಯಾಪ್ತಿ ಇಡೀ ರಾಷ್ಟ್ರಕ್ಕೆ ಅನ್ವಯಿಸುತ್ತದೆ. ರಾಜ್ಯವಿಶ್ವವಿದ್ಯಾಲಯಗಳ ಮೇಲೆ ರಾಜ್ಯದ ನೇರ ನಿಯಂತ್ರಣವಿದ್ದರೆ ಕೇಂದ್ರೀಯ ವಿಶ್ವವಿದ್ಯಾಲಯಗಳು ಕೇಂದ್ರ ಸರ್ಕಾರದ ಅಥವಾ ಅದು ಕಾನೂನುಬದ್ಧವಾಗಿ ರೂಪಿಸಿರುವ ಸ್ವಯಮಾಡಳಿತ ಸಂಸ್ಥೆಯ ನಿಯಂತ್ರಣಕ್ಕೊಳಪಟ್ಟಿರುತ್ತವೆ. ರಾಜ್ಯವಿಶ್ವವಿದ್ಯಾಲಯಗಳಿಗೆ ಆಯಾ ರಾಜ್ಯದ ರಾಜ್ಯಪಾಲರು ಕುಲಪತಿಗಳಾಗಿದ್ದರೆ ಕೇಂದ್ರೀಯ ವಿಶ್ವವಿದ್ಯಾಲಯಗಳಿಗೆ ರಾಷ್ಟ್ರಾಧ್ಯಕ್ಷರು ದರ್ಶಕರು (ವಿಸಿಟರ್) ಆಗಿರುತ್ತಾರೆ.

	ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯ : ಇದು 1920ರಲ್ಲಿ ಆರಂಭವಾಯಿತು. ಅಂದಿಗಾಗಲೆ ಅಸ್ತಿತ್ವದಲ್ಲಿದ್ದ ಮಹಮಡನ್ ಆಂಗ್ಲೋ ಓರಿಯಂಟಲ್ ಕಾಲೇಜ್ ಎಂಬ ಸಂಸ್ಥೆಯನ್ನು ಪರಿವರ್ತಿಸಿ ಈ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಯಿತು. ಮಹಮ್ಮದೀಯರ ಉನ್ನತ ಶಿಕ್ಷಣಕ್ಕಾಗಿ ಬೋಧಿಸುವ ಮತ್ತು ಅಂಗೀಕರಿಸುವ (ಅಫಿಲಿಯೇಟಿಂಗ್) ವಿಶ್ವವಿದ್ಯಾಲಯವಾಗಿ ಆರಂಭವಾದ ಈ ಸಂಸ್ಥೆ ಸಯ್ಯದ್ ಅಹಮ್ಮದ್ದರ ಆಸಕ್ತಿಯ ಫಲವಾಗಿ ಅಸ್ತಿತ್ವಕ್ಕೆ ಬಂತು.

	ದೆಹಲಿ ವಿಶ್ವವಿದ್ಯಾಲಯ: ಇದು 1927ರಲ್ಲಿ ಅಂಗೀಕರಿಸುವ ವಿಶ್ವವಿದ್ಯಾಲಯವಾಗಿ ಆರಂಭವಾಯಿತು. ಆಗ ಇದರ ಅಂಗೀಕರಣ ವ್ಯಾಪ್ತಿಯಲ್ಲಿ ಸೇಂಟ್‍ಸ್ಟೀವನ್ಸ್ ಕಾಲೇಜು, ಹಿಂದಿ ಕಾಲೇಜು ಮತ್ತು ರಾಂಜಾಸ್ ಕಾಲೇಜು ಸೇರಿದ್ದವು. ಅನಂತರ ಸಮಿತಿಯೊಂದರ ಸಲಹೆಯಂತೆ ಭಾರತ ಸರ್ಕಾರ ಇದನ್ನು ಸಂಯುಕ್ತ (ಫೆಡರಲ್) ವಿಶ್ವವಿದ್ಯಾಲಯವನ್ನಾಗಿ ಪರಿವರ್ತಿಸಿತಲ್ಲದೆ, ಕಾಲೇಜುಗಳನ್ನು ಅಂಗೀಕರಿಸುವ ಅವಕಾಶವನ್ನೂ ನೀಡಿತು.

	ಬನಾರಸ್ ಹಿಂದೂ ವಿಶ್ವವಿದ್ಯಾಲಯ: 1915ರ ಭಾರತ ಸರ್ಕಾರದ ಶಾಸನವೊಂದರ ಪ್ರಕಾರ ಕಾಶಿಯಲ್ಲಿ ಸ್ಥಾಪನೆಯಾದ ಈ ವಿಶ್ವವಿದ್ಯಾಲಯ 1917ರಲ್ಲಿ ಕಾರ್ಯಾರಂಭ ಮಾಡಿತು. ಪಂಡಿತ ಮದನಮೋಹನ ಮಾಳವೀಯರು ಇದರ ಸಂಸ್ಥಾಪಕರು. ಅವರು ವಿಶ್ವವಿದ್ಯಾನಿಯಲಯದ ಮೂಲನಿಧಿಯನ್ನೂ ಸಂಗ್ರಹಿಸಿಟ್ಟರು. ಮುಸ್ಲಿಮರ ಶಿಕ್ಷಣದ ಬಗ್ಗೆ ಅಲಿಘರ್ ವಿಶ್ವವಿದ್ಯಾಲಯ ಆದ್ಯ ಗಮನ ಕೊಟ್ಟಂತೆ ಹಿಂದೂಗಳ ಉನ್ನತ ಶಿಕ್ಷಣದ ಬಗ್ಗೆ ಆದ್ಯ ಗಮನವೀಯುವುದು ಈ ಸಂಸ್ಥೆಯ ಮೂಲೋದ್ದೇಶ.

	ವಿಶ್ವಭಾರತಿ ವಿಶ್ವವಿದ್ಯಾಲಯ: 1929ರಲ್ಲಿ ಇದನ್ನು ರಾಷ್ಟ್ರದ ಖ್ಯಾತ ಕವಿ ರವೀಂದ್ರನಾಥ ಠಾಕೂರರು ಸ್ಥಾಪಿಸಿದರು. ಆಗ ಅಲ್ಲಿ ಲಲಿತಕಲೆಗಳು, ಶಿಕ್ಷಣಶಾಸ್ತ್ರ, ತತ್ತ್ವಶಾಸ್ತ್ರ, ಮಾನವಿಕ ವಿಷಯಗಳು, ವಿಜ್ಞಾನಶಾಸ್ತ್ರಗಳು-ಇವುಗಳ ಶಿಕ್ಷಣಕ್ಕೆ ಸೌಲಭ್ಯ ಕಲ್ಪಿಸಲಾಗಿತ್ತು. ಪಾಶ್ಚಾತ್ಯ ವಿಜ್ಞಾನ ಮತ್ತು ಸಂಸ್ಕøತಿಗಳ ಉತ್ತಮಾಂಶಗಳನ್ನು ಭಾರತೀಯ ಜ್ಞಾನ ಮತ್ತು ಸಂಸ್ಕøತಿಗಳೊಡನೆ ಸಮನ್ವಯಗೊಳಿಸಿಕೊಂಡು ವಿಶ್ವ ಸಾಮರಸ್ಯವನ್ನು ಸ್ಥಾಪಿಸಬೇಕೆಂಬ ಹಿರಿಯ ಉದ್ದೇಶವನ್ನು ಇದರ ಸಂಸ್ಥಾಪಕರು ತಳೆದಿದ್ದರು. ಇದು ಭಾರತದ ಬೇರೆ ಬೇರೆ ಭಾಗಗಳಿಂದಲ್ಲದೆ ಅನ್ಯದೇಶಗಳಿಂದಲೂ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತ ಅಂತರರಾಷ್ಟ್ರೀಯ ಕೀರ್ತಿಯನ್ನು, ಸ್ಥಾಪಕರ ಜೀವಿತ ಕಾಲದಲ್ಲೇ ಗಳಿಸಿತ್ತು.

	ಜವಹರಲಾಲ್ ವಿಶ್ವವಿದ್ಯಾಲಯ, ನವದೆಹಲಿ: ಕೇಂದ್ರ ಸರ್ಕಾರ ಇದನ್ನು 1968ರಲ್ಲಿ ಪಂಡಿತ ಜವಹರಲಾಲ್ ನೆಹ್ರು ಅವರ ಸ್ಮಾರಕ ಸಂಸ್ಥೆಯಾಗಿ ಆರಂಭಿಸಿತು. ರಷ್ಯದ ನೆರವಿನಿಂದ ಆಗಿಂದಾಗಲೇ ಅಲ್ಲಿ ಆರಂಭವಾಗಿದ್ದ ರಷ್ಯನ್ ಅಧ್ಯಯನ ಸಂಸ್ಥೆಯನ್ನು (ಇನ್ಸ್ಟಿಟ್ಯೂಟ್ ಆಫ್ ರಷ್ಯನ್ ಸ್ಟಡೀಸ್) ಇದರೊಡನೆ ಸೇರಿಸಲಾಗಿದೆ. ವ್ಯಾಸಂಗಕ್ಕೆ ಅಂತರ್ವಿಷಯ ವಿಧಾನಾವಲಂಬನ (ಇಂಟರ್ ಡಿಸಿಪ್ಲಿನರಿ ಅಪ್ರೋಚ್) ಅಗತ್ಯವಿರುವ ವಿಷಯಗಳ ಹಲವು ಅಂತರರಾಷ್ಟ್ರೀಯ ಪ್ರಾಮುಖ್ಯವನ್ನುಳ್ಳ ಅಧ್ಯಯನ ಕೇಂದ್ರಗಳನ್ನೊಳಗೊಂಡ ಏಳು ಪ್ರಮುಖ ಮಹಾಪಾಠಶಾಲೆಗಳನ್ನು ಸ್ಥಾಪಿಸುವ ಯೋಜನೆಯನ್ನು ಇದು ಹೊಂದಿದೆ. ಜೀವವಿಜ್ಞಾನಗಳು, ಪರಿಸ್ಥಿತಿವಿಜ್ಞಾನಗಳು, ಗಣಕಯಂತ್ರ ವಿಜ್ಞಾನಗಳು, ಸಮಾಜವಿಜ್ಞಾನಗಳು, ಅಂತರರಾಷ್ಟ್ರೀಯ ಸಂಬಂಧಗಳು ಮತ್ತು ರಾಯಭಾರಕೌಶಲ್ಯ, ಭಾಷೆಗಳು, ರಚನಾ(ಸೃಷ್ಟ್ಯಾ)ತ್ಮಕ ಕಲೆಗಳು-ಇವೇ ಆ ಏಳು ಮಹಾಪಾಠಶಾಲೆಗಳಲ್ಲಿ ಅಧ್ಯಯನ ಮಾಡುವ ವಿಷಯಗಳ ಏಳು ಕ್ಷೇತ್ರಗಳು.
 
 	ಸ್ವಾತಂತ್ರ್ಯಾನಂತರ, ರಾಧಾಕೃಷ್ಣನ್ ಶಿಕ್ಷಣ ಆಯೋಗದ ಸಲಹೆಯಂತೆ ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯ ಮತ್ತು ಬನಾರಸ್ ಹಿಂದೂ ವಿಶ್ವವಿದ್ಯಾಲಯಗಳನ್ನು ಭಾರತ ಸರ್ಕಾರ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡು ಧಾರ್ಮಿಕ ಪಂಥಗಳ ಹೆಸರುಗಳನ್ನೊಳಗೊಂಡಿರುವ ಈ ಎರಡು ವಿಶ್ವವಿದ್ಯಾಲಯಗಳಿಗೂ ಜಾತಿಮತಗಳ ಭೇದವಿಲ್ಲದೆ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳಬಹುದಾದ ರೀತಿಯಲ್ಲಿ ಅವುಗಳ ಅಂಗರಚನೆಯನ್ನು ತಿದ್ದುಪಡಿ ಮಾಡಿತು. ಅನಂತರ 1951-52ರಲ್ಲಿ ದೆಹಲಿ ವಿಶ್ವವಿದ್ಯಾಲಯದ ಅಂಗರಚನೆಯನ್ನೂ ತಿದ್ದುಪಡಿ ಮಾಡಿ ಬೋಧಿಸುವ ಮತ್ತು ಅಂಗೀಕರಣ ನೀಡುವ ವಿಶ್ವವಿದ್ಯಾಲಯವನ್ನಾಗಿ ಅದನ್ನು ಪರಿವರ್ತಿಸಲಾಯಿತು. ಅದು ತನಕ ಆ ವಿಶ್ವವಿದ್ಯಾಲಯದ ಕುಲಪತಿಗಳಾಗಿರುತ್ತಿದ್ದ ರಾಷ್ಟ್ರಾಧ್ಯಕ್ಷರು ಮುಂದೆ ಅದರ ದರ್ಶಕ (ವಿಸಿಟರ್) ಆದರು. ಈ ಬದಲಾವಣೆಯ ಫಲವಾಗಿ ಅದು ತನಕ ಕುಲಪತಿಗಳಿಗಿದ್ದ ಅಧಿಕಾರದ ಬಹುಭಾಗ ವಿಶ್ವವಿದ್ಯಾಲಯದ ಆಡಳಿತ ಮಂಡಳಿಗೆ (ಕೋರ್ಟ್) ವರ್ಗವಾಯಿತು. 1951ರಲ್ಲಿ ವಿಶ್ವಭಾರತಿ ವಿಶ್ವವಿದ್ಯಾಲಯವನ್ನು ಕೇಂದ್ರಸರ್ಕಾರ ತನ್ನ ಆಡಳಿತಕ್ಕೆ ಸೇರಿಸಿಕೊಂಡಿತು. 1968-69ರಲ್ಲಿ ಕೇಂದ್ರಸರ್ಕಾರದ ಐದನೆಯ ವಿಶ್ವವಿದ್ಯಾಲಯವಾಗಿ ದೆಹಲಿಯ ಜವಹರಲಾಲ್ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಯಿತು. ಅದಕ್ಕೆ ರಾಷ್ಟ್ರಾಧ್ಯಕ್ಷರು ದರ್ಶಕರಾಗಿಯೂ ಪ್ರಧಾನಮಂತ್ರಿಯವರು ಕುಲಪತಿಗಳಾಗಿಯೂ ಇರುವರು.

	1953ರಲ್ಲಿ ಒಂದು ಕಾರ್ಯಕಾರಿ ಆದೇಶದ (ಎಕ್ಸಿಕ್ಯುಟೀವ್ ಆರ್ಡರ್) ಮೂಲಕ ಅಸ್ತಿತ್ವಕ್ಕೆ ಬಂದ ವಿಶ್ವವಿದ್ಯಾಲಯದ ಧನ ಆಯೋಗದ ಮೂಲಕ ಕೇಂದ್ರ ಸರ್ಕಾರ ಈ ವಿಶ್ವವಿದ್ಯಾಲಯಗಳಿಗೆ ಹಣವನ್ನೊದಗಿಸುತ್ತದೆ. 1968-69ರಲ್ಲಿದ್ದ ನಾಲ್ಕು ಕೇಂದ್ರೀಯ-ವಿಶ್ವವಿದ್ಯಾನಿಲಯಗಳ ಮತ್ತು ಅವುಗಳ ಅಂಗೀಕೃತ ಕಾಲೇಜುಗಳ ಚಾಲ್ತಿ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳಿಗಾಗಿ ಒಟ್ಟು 8.07 ಕೋಟಿ ರೂಪಾಯಿಗಳನ್ನು ವಿಶ್ವವಿದ್ಯಾಲಯದ ಧನ ಆಯೋಗ ಕೇಂದ್ರ ಸರ್ಕಾರದ ಪರವಾಗಿ ಅನುದಾನದ ರೂಪದಲ್ಲಿ ವೆಚ್ಚ ಮಾಡಿತು.

	ಹೊಸ ಕೇಂದ್ರೀಯ ವಿಶ್ವವಿದ್ಯಾಲಯಗಳು: ಪ್ರತಿ ರಾಜ್ಯದಲ್ಲೂ ಒಂದೊಂದು ಕೇಂದ್ರೀಯ ವಿಶ್ವವಿದ್ಯಾಲಯವನ್ನು ಸ್ಥಾಪಿಸಬೇಕೆಂಬ ಕೋರಿಕೆ ಈಚೆಗೆ ಹೆಚ್ಚುತ್ತಿದೆ. ಇದರಿಂದ ರಾಜ್ಯದ ಶಿಕ್ಷಣ ವ್ಯವಸ್ಥೆಗೆ ಒಂದು ಘನತೆ ಬರುವುದರ ಜೊತೆಗೆ ಅದಕ್ಕಾಗುವ ಪೂರ್ಣವೆಚ್ಚವನ್ನು ಕೇಂದ್ರಸರ್ಕಾರವೇ ವಹಿಸುವುದರಿಂದ ರಾಜ್ಯಸರ್ಕಾರಕ್ಕೆ ಆ ಖರ್ಚಿನ ಹೊರೆ ತಪ್ಪುತ್ತದೆ-ಎಂಬ ಭಾವನೆಯೇ ಇದಕ್ಕೆ ಕಾರಣ. ತಮ್ಮ ರಾಜ್ಯದ ಎಲ್ಲೆಯಲ್ಲಿರುವ ವಿಶ್ವವಿದ್ಯಾಲಯದ ಆಡಳಿತದಲ್ಲಿ ತಮಗಿರುವ ಶಾಸನಬದ್ಧ ಅಧಿಕಾರವನ್ನು ಬಿಟ್ಟುಕೊಡಲು ಇಷ್ಟವಿಲ್ಲದ ಕೆಲವು ರಾಜ್ಯಗಳು ಇದನ್ನು ಒಪ್ಪುತ್ತಿಲ್ಲ. ಆ ಬಗ್ಗೆ ರಾಜ್ಯದ ಬೊಕ್ಕಸಕ್ಕೆ ಅಧಿಕ ಹೊರೆಯಾದರೂ ತಮ್ಮ ವಿಶ್ವವಿದ್ಯಾಲಯವನ್ನು ಕೆಂದ್ರಕ್ಕೆ ವಹಿಸಿಕೊಡಲು ಅವು ಒಪ್ಪುತ್ತಿಲ್ಲ. ಈಚೆಗೆ ಈ ಬಗ್ಗೆ ಪರಿಶೀಲನೆ ನಡೆಸಿ ಕೊಠಾರಿ ಶಿಕ್ಷಣ ಆಯೋಗ ಪ್ರತಿರಾಜ್ಯದಲ್ಲೂ ಕೇಂದ್ರೀಯ ವಿಶ್ವವಿದ್ಯಾಲಯವನ್ನು ಸ್ಥಾಪಿಸುವುದು ಸಾಧುವಲ್ಲವೆಂದು ಅಭಿಪ್ರಾಯಪಟ್ಟಿದೆ.

	ರಾಜ್ಯದಲ್ಲಿ ಕೇಂದ್ರ ಸರ್ಕಾರ ವಿಶ್ವವಿದ್ಯಾಲಯವೊಂದನ್ನು ನಡೆಸುವುದಾದರೆ ವಿಶ್ವವಿದ್ಯಾಲಯ ತೀವ್ರಗತಿಯಲ್ಲಿ ಅಭಿವೃದ್ಧಿ ಹೊಂದುವುದು; ಸ್ಥಳೀಯವೆನ್ನಬಹುದಾದ ಅನುಚಿತ ಕೈವಾಡವಿಲ್ಲದೆ ಅದು ತನ್ನ ಕರ್ತವ್ಯವನ್ನು ಉನ್ನತಮಟ್ಟದಲ್ಲಿ ದಕ್ಷತೆಯಿಂದ ನಿರ್ವಹಿಸಲು ಸಾಧ್ಯವಾಗುವುದು. ಇದೆಲ್ಲ ನಿಜ. ಆದರೆ ಈ ಎರಡು ಸೌಲಭ್ಯಗಳಿಗಾಗಿ ಪ್ರತಿರಾಜ್ಯದಲ್ಲೂ ಕೇಂದ್ರೀಯ ವಿಶ್ವವಿದ್ಯಾಲಯವನ್ನು ಸ್ಥಾಪಿಸುವುದರ ಬದಲು ಇತರ ಮಾರ್ಗಗಳಿಂದ ಅದೇ ಸೌಲಭ್ಯಗಳನ್ನು ದೊರಕಿಸಿಕೊಳ್ಳಬಹುದೆಂದು ಅಭಿಪ್ರಾಯಪಟ್ಟು ಕೊಠಾರಿ ಶಿಕ್ಷಣ ಆಯೋಗ ಅದಕ್ಕಾಗಿ ಆಯ್ದ ಕೆಲವು ರಾಜ್ಯಗಳಲ್ಲಿ ಒಂದೊಂದು ವಿಶ್ವವಿದ್ಯಾಲಯವನ್ನು ಪ್ರಧಾನ (ಮೇಜರ್) ವಿಶ್ವವಿದ್ಯಾಲಯವನ್ನಾಗಿ ಪರಿವರ್ತಿಸುವ ವಿಷಯವನ್ನು ಪ್ರತಿವಾದಿಸಿದೆ. ಅಲ್ಲದೆ ರಾಜ್ಯ ಸರ್ಕಾರದ ಅನುಚಿತ ಕೈವಾಡವನ್ನು ತಪ್ಪಿಸಲು ಅವುಗಳ ಅಂಗರಚನೆಯಲ್ಲಿ ಅಗತ್ಯವೆನಿಸುವ ಬದಲಾವಣೆಗಳನ್ನು ಮಾಡಿಕೊಳ್ಳಬಹುದೆಂದೂ ಅದು ಸೂಚಿಸಿದೆ.

		(ಎನ್.ಎಸ್.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ